Monday, September 28, 2020

ಮರಣಶಾಸನ ಕಾಯ್ದೆಗಳು

ಹಿಂದೆ ಇದ್ದ ಉಳುವವನೆ ಒಡೆಯ ಇಂದು ಉಳ್ಳವನೇ ಒಡೆಯ ಎಂಬಂತೆ ನಮ್ಮ ಸರ್ಕಾರಗಳು ಕೃಷಿ ಮತ್ತು ಭೂಸುಧಾರಣಾ ಕಾಯಿದೆಗಳನ್ನ ತರತೂರಿಯಲ್ಲಿ ಯಾವುದೇ ಚರ್ಚೆಗಳನ್ನ ಮಾಡದೆ ಸುಗ್ರಿವಾಜ್ಞೆಯ ಮೂಲಕ ತಂದಿದ್ದಾರೆ ಇವರ ಮೂಲ ಉದ್ದೇಶ ಎಲ್ಲವನ್ನೂ ಖಾಸಗೀಕರಣ ಮಾಡುವುದು. 2006 ರಲ್ಲಿ ಬಿಹಾರ ಸರ್ಕಾರ ತಂದ ಇಂತಹದೆ ಕಾಯಿದೆಯಿಂದ ಇಂದು ಅಲ್ಲಿನ ರೈತನ ಸ್ಥಿತಿ ಹೀನವಾಗಿದೆ ವೈಯಕ್ತಿಕವಾಗಿ ನಾನು ಈ ಕಾಯಿದೆಗಳನಷ್ಟೇ ಅಲ್ಲ ಹಿಂದೆ ಇದ್ದ ಸರ್ಕಾರಗಳು ತಂದ ಅನೇಕ ಕಾಯಿದೆಗಳಿಗೆ ವಿರೋಧವಿದೆ ಯಾಕೆಂದರೆ ಯಾವ ಸರ್ಕಾರಗಳೂ ರೈತನಿಗೆ ಕನಿಷ್ಟಪಕ್ಷ ಕನಿಷ್ಟಬೆಂಬಲದ ಬಗ್ಗೆ ಏನೂ ಯೋಜನೆಗಳನ್ನ ತರದೆ ಇರುವುದಕ್ಕೆ. ವೈಯಕ್ತಿಕವಾಗಿ ನಾನೇಕೆ ಈ ಮಸೂದೆಗಳನ್ನ ಕಡ ಖಂಡಿತವಾಗಿ ವಿರೋಧಿಸುತ್ತೆನೆಂದರೆ....

* ಈ ಮಸೂದೆಗಳು ರೈತರಿಗೆಮರಣಶಾಸನ‌ವಾಗಲಿದ್ದು ಇದು ಎಪಿಎಂಸಿ ಮಾರುಕಟ್ಟೆಯನ್ನ ಸಂಪೂರ್ಣವಾಗಿ ದುರ್ಬಲಗೊಳಿಸುವ ಕೆಲಸಕ್ಕೆ ಬರೆದ ಮುನ್ನುಡಿಯಾಗಿದೆ.

*ಸರ್ಕಾರವೇ ಹೇಳುವ ಹಾಗೆ ದಲ್ಲಾಳಿಗಳಿಂದ ಆಗುತ್ತಿರುವ ಅನ್ಯಾಯವನ್ನ ಸರಿಪಡಿಸುವ ಉದ್ದೇಶದಿಂದ ಈ ಮಸೂದೆಗಳನ್ನ ತಂದಿರುವುದಾಗಿ ಹೇಳಿದ್ದಾರೆ ಇದು ಮೂರ್ಖತನ ಯಾಕೆಂದರೆ 1956ರ ಆಚೆಗೆ ಕೃಷಿಮಾರುಕಟ್ಟೆಗಳ ಮೇಲೆ ಸರ್ಕಾರಗಳ ಯಾವುದೇ ನಿಯಂತ್ರಣವಿರಲಿಲ್ಲ ಹಾಗಾಗಿ ಅಲ್ಲಿನ‌ ಮೋಸಗಳನ್ನರಿತೇ 1956ರಲ್ಲಿ ಕರ್ನಾಟಕ ಎಪಿಎಂಸಿ ಕಾಯಿದೆ ಜಾರಿಗೆ ತಂದು ವರ್ತಕರನ್ನ ನಿಯಂತ್ರಿಸುತ್ತ ರೈತರೂಗಳು ತಾವು ಬೆಳೆದ ಬೆಳೆಯನ್ನ ಎಪಿಎಂಸಿ ಮಾರುಕಟ್ಟೆಗೆ ತಂದು ಮಾರಟ ಮಾಡುತ್ತಿದ್ದಾರೆ.

*ಆದರೆ ಹೊಸ ಮಸೂದೆಗಳ ಅನ್ವಯ ರೈತರ ಉತ್ಪನ್ನಗಳನ್ನ ಮಾರಾಟ ಮಾಡಲು ರೈತ ಮಾರುಕಟ್ಟೆಗೆ ಹೋಗಬೇಕೆಂದಿಲ್ಲ ಬದಲಾಗಿ ವರ್ತಕರೇ ಮನೆ ಬಾಗಿಲಿಗೆ ಬಂದು ಖರೀಸುವ ವ್ಯವಸ್ಥೆ ಮಾಡುವುದು  ರೀ ಸ್ವಾಮಿ ಅಲ್ಲಿಗೆ ಬರುವುದೇ ಈ reliance, Tata, More, ಅಂತಹ ಸೂಪರ್ ಮಾರ್ಕೆಟ್ಗಳು ಅಲ್ಲಿಗೆ ಬಂದು  ಅವರೂ ಕಂಡಿತ ರೈತನಿಗೆ ಓಳ್ಳೆಯ ಬೆಲೆಗೆ ಖರೀದಿಯನ್ನಂತೂ ಮಾಡುವುದಿಲ್ಲ ಕಾರಣ ಅವರುಗಳ ಮೂಲ ಉದ್ದಯ "ಲಾಭ" ಮಾತ್ರ ಅಂದರೆ   ಈ ಸರ್ಕಾರ ತನ್ನ ಸ್ನೇಹಿತರಾದ ಬಂಡವಾಳಶಾಹಿಗಳಿಗೆ ಮತ್ತು ಕಾರ್ಪೊರೇಟ್ ಜಗತ್ತಿಗೆ ಸಹಾಯ ಮಾಡವುದಷ್ಟೇ ಹೊರತೂ ರೈತನಿಗೆ ಇದರಿಂದ ಯಾವುದೆ ಉಪಯೋಗವಿಲ್ಲ ಕಾರಣವಿಷ್ಟೇ ನನ್ನ ಸ್ನೇಹಿತರಿಗೆ ಒಂದು ಮಾತು ನೆನಪಿಸುತ್ತೆನೆ *Karl Marx once said " If u decide to hang the capitalist, a capitalist will sell u the rope" ಈ  ಮಾತು ಇಷ್ಟು ಬೇಗ ಮರೆತರೆ ಹೇಗೆ.

*ಈ ಖಾಸಗೀಕರಣದಿಂದ ಸಾಮಾನ್ಯಜನರಿಗೆ ಯಾವ ರೀತಿಯ ಸಹಾಯವಿದೆ ಹೇಳಿ ಯೋಚಿಸುವುದಕ್ಕೂ ಸಾದ್ಯವಿಲ್ಲ ಯಾಕೆಂದರೆ ಉದಾಹರಣೆಗೆ: ಈ ರಸ್ತೆ ನಿಗಮಗಳನ್ನೆಲ್ಲ ಈ ಹಿಂದೆಯೇ ಖಾಸಗಿಯವರಿಗೆ ಒಪ್ಪಿಸಿರುವುದರಿಂದ ನಮಗೆನೂ ಲಾಭ ಜನರಿಗೆ ಟೋಲ್ಗೇಟ್ಗಳಲ್ಲಿ ಅಗುತ್ತಿರುವ ದಬ್ಬಾಳಿಕೆ ಕಾಣುವುದಿಲ್ಲವೇ ಮಜಾ ಅಂದ್ರೆ ಸರ್ಕಾರಿ ಬಸ್ಸುಗಳು ಕೂಡ ದುಡ್ಡುಕೊಟ್ಟಿ ಮುಂದೆ ಹೋಗ ಬೇಕು ದಟ್ ಮೀನ್ಸ್ ವಿ ಆರ್ ಅಂಡರ್ ಟ್ರಬಲ್ ಅಂತ.

* ಈ ಮಸೂದೆಗಳನ್ನ ಸುಗ್ರೀವಾಜ್ಞನೆಯ ಮೂಲಕ ತರಲು ಹೊರಟಿರುವುದು ಉತ್ತರದ ಮಂದಿಗಳ ಕೈಗೊಂಬೆಯಾಗಿರುವುದರಿಂದ ಅಂದರೆ ಕೇಂದ್ರದ ಒಬ್ಬ ಮಂತ್ರಿ ರಾಜ್ಯದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರಬರೆದು ಆದಷ್ಟೂ ಬೇಗ ಈ ಮಸೂದೆಗಳನ್ನ ಜಾರಿಗೆ ತಂದು ವರದಿ ಒಪ್ಪಿಸುವಂತೆ ಹೇಳಿರುವುದಕ್ಕಾಗಿಯೇ ನಮ್ಮ ಸರ್ಕಾರ ಯಾವುದೇ ಮುಂದಾಲೋಚನೆ ಇಲ್ಲದೆ ಯಾವುದೇ ಚರ್ಚೆಇಲ್ಲದೆ ಮಸೂದೆಗಳನ್ನ ಜಾರಿಗೆ ತಂದು ರೈತರಿಗೆ ಮೋಸ ಮಾಡಿ ಪಟ್ಟಬದ್ದಹಿತಸಕ್ತಿಗಳ ಕಪಿಮುಷ್ಟಿಯಲ್ಲಿ ಸಿಲುಕಿದೆ.

*ಇದಕ್ಕೆ ಪೂರಕವಾಗಿ ಸರ್ಕಾರವೂ ಭೂ ಸುಧಾರಣೆ ಮಸೂದೆ, ಇದನ್ನೂ ಕೂಡ ಯಾವುದೇ ಚರ್ಚೆಇಲ್ಲದೆ ಜಾರಿಗೆ ತಂದಿರುವುದು. ಒಂದು ಘಟನೆಯನ್ನ ನೆನಪಿಸುವುದಕ್ಕೆ ಇಷ್ಟ ಪಡುತ್ತೆನೆ ಹಿಂದೆ ಮನಮೋಹನ್ ಸಿಂಗ್ ರವರೂ ಪ್ರಧಾನಿಗಳಾಗಿದ್ದಾಗ ಬಾಲಿವುಡ್ನ ಖ್ಯಾತ ನಟನೊಬ್ಬ ಬರೋಬ್ಬರಿ ಸುಮಾರು 250 ಕ್ಕೂ ಹೆಚ್ಚು ಎಕ್ಕರೆಯ ಕೃಷಿಭೂಮಿಯನ್ನ ಖರೀದಿ ಮಾಡಿದ್ದ ಆದರೆ ಮುಂದೆ ಘನವೆತ್ತ ನ್ಯಾಯಾಲಯ ಅಷ್ಟು ಭೂಮಿಯನ್ನ ವಶಕ್ಕೆ ಪಡೆಯಿತು. ಆದರೆ ಇಂದು ಈ ಹೊಸ ಕಾಯ್ದೆಯ ಅನ್ವಯ ಇಂತಹವರೂ ಮತ್ತೆ ಭೂಮಿ ಕೊಂಡುಕೊಳ್ಳಲ್ಲೂ ಶುರು ಮಾಡುತ್ತಾರೆ ಕೊಂಡ ಭೂಮಿಯಲ್ಲೇನೂ ಅವರು ಆಹಾರಬೆಳೆಗಳನ್ನ ಬೆಳೆಯುತ್ತಾರೆಯೇ ಸಾದ್ಯನೆ ಇಲ್ಲ ಅಲ್ಲಿ ಮತ್ತೆ‌ ಕಾಂಕ್ರೀಟ್ ಗೋಡೆಗಳೆ ಏಳುವುದು. ಮೊದಲೆ ನಮ್ಮ ರೈತರುಗಳು ಆಹಾರಬೆಳೆಗಳನ್ನ ಬೆಳೆಯೋದನ್ನ ಕಡಿಮೆ ಮಾಡಿದ್ದಾರೆ ಇನ್ನೂ ಈ ಕಾಯ್ದೆಗಳಿಂದ ಹಣದ ಆಮಿಷಕ್ಕೆ ಬಲಿಯಾಗಿ ಇದ್ದ ಭೂಮಿಯನ್ನ ಮಾರಿಕೊಂಡು ಬೀದಿಗೆ ಬಿಳುತ್ತಾರಷ್ಟೆ ಯಾಕೆಂದರೆ ಈ ಕಾಯ್ದೆ ನೇರವಾಗಿ  ಶೇಕಡಾ85%  ರೈತರಿಗೆ ತೊಂದರೆಯಾಗಲಿದೆ. ಒಂದು ಉದಾಹರಣೆ  ಹೇಳುತ್ತೆನೆ ಬಿ ಸುರೇಶ್ ರವರ "ಪುಟ್ಟಕ್ಕನ ಹೈವೆ" ಸಿನಿಮಾದಲ್ಲಿ  ಮಂಡ್ಯರಮೇಶ್ ರವರೂ ಒಬ್ಬ ರೈತನಾಗಿ ಕಾಣಿಸಿಕೊಂಡಿದ್ದಾರೆ ಅದರಲ್ಲಿ ಅವರ ಬಳಿ ಇದ್ದ ಕನಿಷ್ಠ ಭೂಮಿಯನ್ನ ಹಣದ ಆಸೆಗೆ ಮಾರಿಕೊಂಡು ಒಂದೆರಡು ವರ್ಷ ಸುಖವಾಗಿದ್ದು ತದನಂತರ ಹಣವಿಲ್ಲದೆ ಬಿದಿಗೆ ಬಂದು ಬಿಳುತ್ತಾರೆ ಇದೇ ಪರಿಸ್ಥಿತಿ ಈ ಕಾಯ್ದೆಗಳ ಮೂಲಕ ನಮ್ಮ ರೈತರಿಗೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

*ಇನ್ನೊಂದು ಬಹುಮುಖ್ಯವಾಗಿ ಕೇಂದ್ರ ಸರ್ಕಾರ ತಂದಿರುವ ಕಾಯಿದೆ "ಅಗತ್ಯವಸ್ತುಗಳ ತಿದ್ದುಪಡಿ-2020 ಮತ್ತು ಬೆಲೆ ಭರವಸೆ ಕಾಯಿದೆ ಅಂದರೆ ಇನ್ನೂ ಮುಂದೆ ಸರ್ಕಾರ ಕೃಷಿ ಉತ್ಪನ್ನಗಳನ್ನ ಬೆಂಬಲಬೆಲೆಗೆ ಖರೀದಿ ಮಾಡುವುದಿಲ್ಲ ಇದರ ಪರಿಣಾಮ " Food Corporation of India" ಸಂಸ್ಥೆಇರುವುದಿಲ್ಲ ಅಂದರೆ ಇನ್ನೂ ಮುಂದೆ ಬಡಜನರಿಗೆ ನ್ಯಾಯಬೆಲೆ ಅಂಗಡಿಯಿಂದ ನೀಡುತ್ತಿದ್ದ ರೇಷನ್ ಕೂಡ ಹಂತಹಂತವಾಗಿ ನಿಲ್ಲಿಸುವುದು ಇದರ ಮುಖ್ಯು ಉದ್ದೇಶವಾಗಿದೆಯೇ ಹೊರತು ಈ ಯಾವುದೇ ಕಾಯಿದೆಗಳಿಂದ ಯಾರಿಗೂ ಉಪಯೋಗವಿಲ್ಲ ಬದಲಾಗಿ ಇದು ಬಂಡವಾಳಶಾಹಿಗಳ, ಕಾರ್ಪೊರೇಟ್ ವ್ಯಕ್ತಿಗಳಲ್ಲಿ ಮಂಧಹಾಸ ಬಂದಿರುವುದಂತೂ ಸ್ಪಷ್ಟವಾಗಿದೆ.

ನಮಸ್ಕಾರ.

ಅನಿಲ್ ಕುಮಾರ್ ಹೆಚ್ ಜಿ

Sunday, June 7, 2020

ಕೂಲಿ ಕಾರ್ಮಿಕನ ಸಾತ್ವಿಕ ಕ್ರಾಂತಿಗೀತೆ

ಕೂಲಿ ಕಾರ್ಮಿಕನ ಸಾತ್ವಿಕ ಕ್ರಾಂತಿಗೀತೆ


ಹಸಿದ ಹೊಟ್ಟೆಯನ್ನ ಅಣಕಿಸುವಿರೇನೂ
ಬತ್ತದ ಜೀವರಕ್ತ ಇನ್ನೂ ಗಟ್ಟಿಯಾಗಿದೆ
ಬೆಳಕಿದೆ, ಬರವಸೆಯಿದೆ
ದಾರಿ ದೂರವಿರಬಹುದು ಆದರೇನೂ
ಗುರಿಮುಟ್ಟುವ ಚಲವಿದೆ, ದೇಹದಲ್ಲಿ ಬಲವಿದೆ.

ಊರು ಬಿಟ್ಟು ಸುಡು ಬಿಸಿಲ ಲೆಕ್ಕಿಸದೆ
ಹನಿ ಹನಿ ಬೆವರಿನಲ್ಲಿ ರಕ್ತ ಸುರಿಸಿ ದೇಶ ಕಟ್ಟಿದ ನಮಗೆ 
ಒಂದು ಚೂರು ರೊಟ್ಟಿ ನೀಡಲು 
ನಿಯಮವಳಿಗಳು ಬೇಕೆ ಅಥವಾ
ಆಧಾರ್ ಕಾರ್ಡ್ ನ ಕೊನೆಯ ನಾಲ್ಕು ಸಂಖ್ಯೆಗಳು ಸಾಕೇ.

ಬಸವಳಿದ ಈ ದೇಹಕ್ಕೆ
ಬಂದೂಕಿನ ಗುಂಡಿಗೆ
ಭೂಟಿನ ಏಟಿನ ಹೇದರಿಕೆಯೇನೂ
ಶತಮಾನಗಳ ಇತಿಹಾಸವಿದೆ ನಮ್ಮ ದೇಹದ 
ಮೇಲಿನ ಗುರುತುಗಳಿಗೆ ಹೆಪ್ಪು ಗಟ್ಟಿದ ಮಾಸದ ಗಾಯಗಳಿಗೆ. 

ಕೂಳಿಗಾಗಿ ಕೂಲಿಗಾಗಿ ಜೋಳಿಗೆ ಹಿಡಿದು 
ಹುಟ್ಟಿದ ನೆಲ ಬದುಕ್ಕಿದ್ದ ಮನೆ ಬಿಟ್ಟು ಬಂದ ನಾವು
ನಿಮ್ಮ ಸಾಮ್ರಾಜ್ಯಶಾಹಿತ್ವದ ದಂಡಯಾತ್ರೆಯಲ್ಲಿ ಸಿಲುಕಿ ನಲುಗಿದೆವು
ಇಗೋ ಇಂದು ತುಂಬಿದೆ ಆ ಜೋಳಿಗೆ
ಅಕ್ಕಿಯ ಕಾಳಿನಿಂದಲ್ಲ ನೋವಿನ‌ ಕಥೆಗಳಿಂದ.

ದಿಕ್ಕಾರವಿದೆ ಮನಸ್ಸಿನಲ್ಲಿ
ರಕ್ತಹೀರುವ ಯಜಮಾನಿಕೆಗೆ
ಆಶ್ವಾಸನೆ ನೀಡುವ ರಾಜಕಾರಣಿಗಳಿಗೆ
ಆದರೆ ನಿಮಗಿದೋ ನಾ‌ ಕೃತಜ್ಞ  ಯಾಕೆಗೊತ್ತೆನು
ದೇಹದಣಿದಿರ ಬಹುದು ಆದರೆ 
ಬದುಕವ , ಜೀವಿಸುವ ಆತ್ಮವಿಶ್ವಾಸಕ್ಕೆ ನೀವು ಕೊಟ್ಟ ಚಡಿಏಟುಗಳೆ ಮೆಟ್ಟಿಲಾಗಿವೆ.

ಅನಿಲ್ ಕುಮಾರ್

Sunday, May 17, 2020

ಗಜಲ್

ಗಜಲ್

ಗಜಲ್ ಒಂದು ಅರೇಬಿಕ್ ಪದ ಗಜಲ್ ಎಂದರೆ ಆಳವಾದ ಭಾವನೆ, ಪ್ರೇಮಿಗಳ ಸಂವಾದ, ದಂಪತಿಗಳ ಮಾತುಕತೆ, ಭಾವುಕ ಜೀವಿಗಳ ಸೂಕ್ಷ್ಮ ಸಂವೇದನೆ, ಪ್ರೇಮಿಗಳ ಜುಗಲ್ ಬಂದಿ, ವಿರಹ ವೇದನೆ ಪ್ರೇಮ ನಿವೇದನೆ, ಪ್ರೀತಿಸುವ ಹೃದಯಗಳ ಚಡಪಡಿಕೆ. ಗಜಲ್ ಗಳು ಒಂದೇ ವಿಷಯ ಒಂದೇ ತರಹದ ದೃಷ್ಟಿಕೋನ ಇಟ್ಟುಕೊಂಡು ಮಾತನಾಡದೇ ಸಾವಿರಾರು ಚಿಂತನೆಗಳಿಂದ ಹತ್ತು ಹಲವು ವಿಚಾರಗಳನ್ನ ಪ್ರತಿಪಾದಿಸುತ್ತವೆ. ಬದುಕಿನ ಎಲ್ಲಾ ರಂಗಗಳ ಹೂರಣದಿಂದ ಸಾಮಾಜಿಕ ಕಳಕಳಿ ಮತ್ತು ವಿಶ್ವಮಾನವತೆಯ ತುಡಿತದಿಂದ ಭೂತ ಭವಿಷ್ಯತ್ವ ವರ್ತಮಾನಗಳ ಬೆಳಕಿನಿಂದ ಮಾತನಾಡುತ್ತವೆ.
ಗಜಲ್ ಗಳ ಪ್ರಕಾರಕ್ಕೆ ಹೊಗುವ ಮೊದಲು ಗಜಲ್ ಅಂಶಗಳ ಬಗ್ಗೆ ತಿಳಿದುಕೊಂಡರೆ ಗಜಲ್ ಪ್ರಕಾರಗಳನ್ನ ಸುಲಭವಾಗಿ ಅರ್ಥಮಾಡಿಕೊಳ್ಳ ಬಹುದು. ( ಮಿಸ್ರ, ಮತ್ಲಾ, ಶೇರ್, ಕಾಫಿಯ, ರವಿ, ರದೀಫ್, ಮಕ್ತಾ, ಬೆಹರ್ ಇವು ಗಜಲ್ ಅಂಶಗಳು)

ಮಿಸ್ರ
ಇದು ಗಜಲ್ನ ಚರಣ ಕವಿಯು ಹೇಳಬೇಕಾದ ವಸ್ತು ವಿಷಯವು ಸಂಪೂರ್ಣ ವಾಕ್ಯ ಸಂದೇಶದೊಂದಿಗೆ ಅರ್ಥಪೂರ್ಣವಾಗಿ ಬಿಂಬಿತವಾಗುವ ಪಂಕ್ತಿಯನ್ನು ಮಿಸ್ರ ಎನ್ನುತ್ತಾರೆ.

ಮತ್ಲಾ.
ಇದು ಗಜಲ್ನನ ಆರಂಭಿಕ ದ್ವಿಪದಿಯಾಗಿದ್ದು ಇದರ ನಿಜವಾದ ಅರ್ಥವು ಉದಯ ಅಥವಾ ಪ್ರಾರಂಭವಾಗುತ್ತದೆ.

ಶೇರ್.
ಇದೊಂದು ಗಜಲ್ನಲ್ಲಿ ಬರುವ ದ್ವಿಪದಿಯಾಗಿದೆ. ಎರಡು ವಾಕ್ಯ ಅಥವಾ ಮಿಸ್ರಗಳಿಂದ ಒಂದು ಶೇರ್ ಆಗುತ್ತದೆ.

ಕಾಫಿಯಾ.
ಈ ಪದವು ‘ಕಪೂ’ ಎಂಬ ಧಾತುವಿನಿಂದ ಉತ್ಪತ್ತಿಯಾಗಿದೆ. ಬೇರೆ ಬೇರೆ ಅರ್ಥ ಸಂದೇಶ ಕೊಡುವ ಸ್ಥಾಯಿಯಲ್ಲದ ಅಕ್ಷರಗಳ ಗುಂಪಿನ ಒಂದು ಪ್ರಾಸಕ್ಕೆ ಕಾಫಿಯ ಎಂದು ಕರೆಯುತ್ತಾರೆ. ಒಂದು ಗಜಲ್ ಪಕ್ವತೆ ಮತ್ತು ಗೇಯತೆ ಕಾಣಲು ಕಾಫಿಯ ಕೇಂದ್ರಬಿಂದು ಆಗಿದೆ ಇದನ್ನು ಗಜಲ್ನ ಹೃದಯ ಹಾಗು ಗಜಲ್ನ ಉಸಿರೆಂದು ಪರಿಣಿತರು ವ್ಯಾಖ್ಯಾನಿಸಿದ್ದಾರೆ. ಗಜಲ್ ಆಗಲು ಕಾಫಿಯಾ ಅತೀ ಮುಖ್ಯವಾಗಿದೆ.

ರವಿ.
ಕಾಫಿಯಾ ಗುಣಲಕ್ಷಣಗಳ ಮತ್ತು ಅದರ ಅಂಶವನ್ನು ಅರ್ಥೈಸುವ ನೆಲೆ ಬೆಲೆಯನ್ನು ಎತ್ತಿ ತೋರಿಸುವ ಕಾಫಿಯಾದ ಕೊನೆಯದಾದ ದಿಟವಾದ ಸ್ಥಿರವಾದ ಅಕ್ಷರವೇ ರವಿ. ಗಜಲ್ ಆಗಲು ಕಾಫಿಯಾ ಎಷ್ಟು ಮುಖ್ಯವೋ ಕಾಫಿಯ ಆಗಲು ರವಿಯು ಅಷ್ಟೇ ಮುಖ್ಯ.

ರದೀಫ್.
ಗಜಲ್ ಕಾವ್ಯದಲ್ಲಿ ಬರುವ ಒಂದೇ ತರಹದ ಅಕ್ಷರಗಳ ಗುಂಪಾಗಿದ್ದು ಕಾಫಿಯಾದ ಮುಂದೆ ಬರುವ ಪದವಾಗಿದೆ. ಇದು ಎಲ್ಲಾ ದ್ವಿಪದಿಗಳಲ್ಲಿ ಪುನರಾವರ್ತಿತವಾಗಿ ಬಂದು ಗಜಲ್ ಕಾಂತಿ ಮತ್ತು ರಮ್ಯತೆ ಸೌಂದರ್ಯವನ್ನ ಹೆಚ್ಚಿಸುತ್ತದೆ.

ಮಕ್ತಾ.
ಇದರ ಅರ್ಥ ಮುಕ್ತಾಯ ಮತ್ತು ಸಂಪೂರ್ಣಗೊಳಿಸುವುದು‌ ಗಜಲ್ ಕಾವ್ಯದಲ್ಲಿ ಮತ್ಲಾ ಪ್ರಾರಂಭವಾದರೆ ಮಕ್ತಾದಲ್ಲಿ ಪೂರ್ಣಗೊಳ್ಳುತ್ತದೆ. ಒಂದು ಗಜಲ್ನ‌ ಕೊನೆಯ ದ್ವಿಪದಿಯಲ್ಲಿ ಕವಿಯ ಹೆಸರು ಅಥವಾ ಕಾವ್ಯನಾಮ ಇರುತ್ತದೆ.

ಬೆಹರ್.
ಒಂದು ಸಂಪೂರ್ಣ ಗಜಲ್ನ ಚರಣ ಅಥವಾ ದ್ವಿಪದಿಗಳನ್ನು ಮಾತ್ರಾಗಣಗಳ ಮೂಲಕ ಅಳೆಯುವಂತಹ ಪಾರದರ್ಶಕ ಸಾಧನವನ್ನು ಬೆಹರ್ ಎಂದು ಕರೆಯುತ್ತಾರೆ.

ಗಜಲ್ ಪ್ರಕಾರಗಳು.
ಗಜಲ್ ಗಳಲ್ಲಿ ಇಂತಿಷ್ಟೇ ಪ್ರಕಾರಗಳಿವೆಯೆಂದು ನಿಖರವಾಗಿ ಹೇಳಲಾಗದಿದ್ದರೂ ಉರ್ದು, ಫಾರ್ಸಿ, ಕನ್ನಡ ಗಜಲ್ಕಾರರ ಮಾಹಿತಿಯನ್ನ ಆಧರಿಸಿ ಹತ್ತೊಂಬತ್ತು ಪ್ರಕಾರದ ಗಜಲ್ಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ.

ಮುರದ್ದಫ್ ಗಜಲ್.
ಗಜಲ್ನ ಎಲ್ಲಾ ನಿಯಮಗಳಿಂದ ಪ್ರತಿಯೊಂದು ದ್ವಿಪದಿಯಲ್ಲಿ ಕ್ರಮಬದ್ಧವಾಗಿ ಸಮಾನ ತೂಕ ಸಮಾನ ಮಾತ್ರಾಗಣದಿಂದ ಪುನರಾವರ್ತಿತ ಪದ ರದೀಫ್ ಮತ್ತು ಒಳಪ್ರಾಸ ಕಾಫಿಯಾಗಳು ಹೊಂದಿರುವ ಗಜಲ್ಗಳಿಗೆ ಮುರದ್ದಫ್ ಗಜಲ್ಗಳೆಂದು ಕರೆಯುತ್ತಾರೆ.

ಗೈರ್ ಮುರದ್ದಫ್ ಗಜಲ್.
ಇದರಲ್ಲಿ ರದೀಪ್ ಇರುವುದಿಲ್ಲ ಆದರೆ ಒಂದು ಮುರದ್ದಫ್ ಗಜಲ್ನನಲ್ಲಿ ಇರುವ ಎಲ್ಲಾ ನಿಯಮಗಳು ಇರುತ್ತವೆ. ಇದನ್ನು “ ಮುಕಪ್ಫ” ಗಜಲ್ ಎಂತಲೂ ಕರೆಯುತ್ತಾರೆ.

ಮುಸಲ್ ಸಲ್ ಗಜಲ್.
ಇದರ ಅರ್ಥ ಒಂದೇ ವಿಷಯದ ಬಗ್ಗೆ ಪ್ರಸ್ತಾಪಮಾಡಿ ಬರೆಯುವುದೆಂದರ್ಥ.

ಗೈರ್ ಮುಸಲ್ ಸಲ್ ಗಜಲ್
ಈ ಗಜಲ್ನ ಎಲ್ಲಾ ದ್ವಿಪದಿಗಳು ಮೂಲ ನಿಯಮಗಳೊಂದಿಗೆ ಬೇರೆ ಬೇರೆ ವಿಷಯಗಳಿಂದ ಓದುಗರನ್ನು ಸೆಳೆಯುತ್ತದೆ. ಒಂದು ದ್ವಿಪದಿ ಹೃದಯದ ಬಗ್ಗೆ ಹೇಳಿದರೆ ಮತ್ತೊಂದು ಪ್ರೇಮದ ಬಗ್ಗೆ ಹೇಳುತ್ತದೆ.

ಆಜಾದ್ ಗಜಲ್
ಇದರ ಹೆಸರೇ ಸೂಚಿಸಿದ ಹಾಗೆ ಸ್ವತಂತ್ರವಾದ ಗಜಲ್ ಆಗಿದೆ. ಇದರಲ್ಲಿ ಚರಣಗಳು ಸಮನಾಗಿ ಇರುವುದಿಲ್ಲ ಆದರೆ ಎಲ್ಲಾ ಮೂಲ ಗಜಲ್ ನಿಯಗಳು ಇರುತ್ತವೆ.

ಜುಲ್ ಕಾಫಿಯ ಗಜಲ್
ಜುಲ್ ಕಾಫಿಯ ಎಂದರೆ ಎರಡೆರಡು ಕಾಫಿಯಗಳನ್ನು ಅಳವಡಿಸಿ ಬರೆಯುವುದು. ಜುಲ್ ಎಂದರೆ ದ್ವೀತಿಯ ಎಂಬ ಅರ್ಥ ಬರುತ್ತದೆ. ಒಂದು ಕಾಫಿಯಾ ಮುಂದೆ ಮತ್ತೊಂದು ಕಾಫಿಯಾ ಬರುವ ಗಜಲ್ ಗಳನ್ನು ಜುಲ್ ಕಾಫಿಯಾ ಗಜಲ್ಗಳೆಂದು ಕರೆಯುತ್ತಾರೆ.

ಸೆಹ್ ಗಜಲ್
ಸೆಹ್ ಎಂಬ ಉರ್ದುಪದದ ಅರ್ಥ ಸಹಿಸು ಸೈರಿಸು ಎಂದು.  ಒಂದು ಗಜಲ್ ತನ್ನ ಜೊತೆಗೆ ಮೂರು ನಾಲ್ಕು ಗಜಲ್ಗಳನ್ನು ಸೇರಿಸಿಕೊಂಡು ಒಂದೇ ಗಜಲ್ ಆಗಿ ಪರಿವರ್ತನೆಯಾಗಿ ಹೋಗುತ್ತದೆ. ಇದು ಏಳನೆಯ ಶತಮಾನದಲ್ಲಿ ರಚಿತವಾದ “ಖಸೀದಾ” ಮಾದರಿಯನ್ನು ಅವಲಂಬಿಸಿದೆ ಎನ್ನಬಹುದು.

ಹುಸ್ನ್ – ಎ – ಮತ್ಲಾ ಗಜಲ್
ಹುಸ್ನ್ ಎಂದರೆ ಸೌಂದರ್ಯ ಅರ್ಥಾತ್ ಒಂದು ಗಜಲ್ನ ಅಂದ ಚೆಂದ ರಮ್ಯತೆಯನ್ನು ಹೆಚ್ಚಿಸುವ ಮತ್ಲಾ ಆಗಿದೆ. ಒಂದು ಗಜಲ್ನ ಮೊದಲ ದ್ವಿಪದಿ ಮತ್ಲಾ ಆಗಿದ್ದು ಎರಡನೇ ದ್ವಿಪದಿ ಸಮತೋಲಿತ ಕಾಫಿಯಾ ರಧೀಫ್ಗಳಿಂದ ಮತ್ಲಾ ಆಗಿ ಕಂಗೊಳಿಸಿದರೆ ಅಂತಹ ಗಜಲ್ ಗಳನ್ನು ಹುಸ್ನ್ ಎ ಸಾನಿ ಗಜಲ್ ಎಂದು ಕರೆಯುತ್ತಾರೆ.

ಮತ್ಲಾ – ಎ – ಸಾನಿ ಗಜಲ್
ಒಂದು ಗಜಲ್ ನಲ್ಲಿ ಎಲ್ಲಾ ನಿಯಮಗಳೊಂದಿಗೆ ಆರಂಭದ ಮೂರು ದ್ವಿಪದಿಗಳು ಮತ್ಲಾ ಆಗಿದ್ದರೆ ಇಂತಹವುಗಳು ಮತ್ಲಾ ಎ ಸಾನಿ ಗಜಲ್ ಆಗಿರುತ್ತವೆ.

ಆ್ಯಂಟಿ ಗಜಲ್
ಇದೊಂದು ಲಾವಣಿಯ ರೂಪದಲ್ಲಿ ಬಿಂಬಿತವಾಗುವ ಗಜಲ್ ದೇಶ ಭಕ್ತಿ ನೆಲದ ಸೊಗಡು, ವೀರಪುರುಷ ವೀರವನಿತೆಯರ ಮಹತ್ವವನ್ನು ಸಾರುವ ಮೂಲಕ ಗಜಲ್ ಹೇಳುತ್ತದೆ.

ಫನ್ನಿ ಗಜಲ್
ಹೆಸರೇ ಸೂಚಿಸುವಂತೆ ಇದು ಒಂದು ಹೊಸ ಪ್ರಕಾರದ ಹಾಸ್ಯ ಮಿಶ್ರಿತವಾದ ಗಜಲ್ ಆಗಿದೆ.

ನಜರಿ ಗಜಲ್
ನಜರ್ ಎಂದರೆ ದೃಷ್ಟಿ ನಜರಿ ಎಂದರೆ ದೃಷ್ಟಿಕೋನ. ಈ ಪ್ರಕಾರದ ಗಜಲ್ ಗಳು ಓದುಗರ ಭಾವನೆ ಆಸಕ್ತಿಯನ್ನು ಕೇಂದ್ರೀಕೃತವಾಗಿ ಇಟ್ಟುಕೊಂಡು ಮನಸುಗಳಿಗೆ ಎಟುಕುವಂತೆ ನೇರವಾಗಿ ಓದಿಸಿಕೊಂಡು ಹೋಗುತ್ತವೆ.

ಸಿಯಾಸಿ ಗಜಲ್
ಸಿಯಾಸತ್ ಎಂದರೆ ಉರ್ದು ಪದದ ಅರ್ಥ ರಾಜಕೀಯ. ಈ ಪ್ರಕಾರದ ಗಜಲ್ ಗಳಲ್ಲಿ ರಾಜಕೀಯ ವಿಚಾರಗಳ ಬಗ್ಗೆ ಪ್ರಸಕ್ತ ಕಾಲಘಟ್ಟ ಸಾಂದರ್ಭಿಕ ಚಿತ್ರಣ ಪ್ರತಿಬಿಂಬಿಸುವ ಕಾವ್ಯ ಪ್ರಕಾರವಾಗಿದೆ.

ಝೆನ್ ಗಜಲ್
ಇದು ಬೌದ್ಧಧರ್ಮದ ತತ್ವ ಸಿದ್ಧಾಂತ ನಂಬಿಕೆಗಳನ್ನು ಆಧ್ಯಾತ್ಮಿಕ ಸಂದೇಶಗಳಿಂದ ತಿಳಿ ಹೇಳುವ ಗಜಲ್ ಆಗಿದೆ.

ಜಿನ್ ಸಿ ಗಜಲ್
ಇದು ಲೈಂಗಿಕ ವಿಷಯಗಳ ಬಗ್ಗೆ ಮಾತನಾಡುವ ಗಜಲ್ ಎಂದು ಹೇಳಲಾಗಿದೆ. ಆದರೂ ಇಂತಹ ಗಜಲ್ ಬರೆಯುವಾಗ ಕವಿಯು ಒಂದು ಸಭ್ಯತೆಯ ದಾಯರೆಯಲ್ಲಿ ಬರೆಯುವುದು ಅವಶ್ಯಕವಾಗಿದೆ.

ಸೂಫಿ ಗಜಲ್
ಪ್ರೇಮ ಮತ್ತು ಭಕ್ತಿ ಆದ್ಯಾತ್ಮದ ತಳಹದಿಯ ಮೇಲೆ ಜಗತ್ತು ತಿರುಗುತಿದೆ ಎಂಬ ಸತ್ಯವನ್ನು ಪ್ರತಿಪಾದಿಸುವ ಪರಸ್ಪರ ಪ್ರೀತಿ ಸ್ನೇಹ ಮಾನವತೆಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಶೇರ್ ಗಳನ್ನು ಈ ಗಜಲ್ ಉದ್ದಕ್ಕೂ ಕಾಣಬಹುದು. ವಿಶ್ವಮಾನವ ಸಂದೇಶಗಳನ್ನು ಸಾರುವಂತಹ‌ ಅನುಭವ ಅನುಭಾವದಿಂದ ಆಧ್ಯಾತ್ಮಿಕ ಬೆಳಕನ್ನು ಚೆಲ್ಲುವ ಗಜಲ್ಗಳನ್ನು ಸೂಫಿ ಗಜಲ್ಗಳೆಂದು ಕರೆಯಲಾಗುತ್ತದೆ.

ರೀಖ್ತ ಗಜಲ್
ಇದು ಫಾರ್ಸಿ ಅರೇಬಿಕ್ ಮತ್ತು ನಾಗರಿ ‌ಭಾಷೆಗಳ ಮಿಶ್ರಿತ ಕಾವ್ಯ ಪ್ರಕಾರವಾಗಿದ್ದು ಉರ್ದು, ಹಿಂದಿ ಪ್ರಾರಂಭಿಕ ಹಂತದ ಗಜಲ್ ಎಂದು ಹೇಳಲಾಗಿದೆ.

ತರಹಿ ಗಜಲ್
ತರಹಿ ಎಂದರೆ ತರಹ ಧಾಟಿ ಶೈಲಿ ಎಂದರ್ಥ. ಅಂದರೆ ಕವಿಯು ತನಗಿಷ್ಟದ ಬೇರೊಬ್ಬ ಕವಿಯ ಗಜಲ್ ನ ಒಂದು ಮತ್ಲಾ ಅಥವಾ ಮಿಸ್ರ ಆರಿಸಿಕೊಂಡು ಮೂಲ ಕವಿಯ ಮಾದರಿಯಲ್ಲೇ ಬರೆಯುವುದನ್ನು ತರಹಿ ಗಜಲ್ ಎಂದು ಕರೆಯುತ್ತಾರೆ.

ಜದೀದ್ ಗಜಲ್
ತನ್ನ ಮೂಲ ಸ್ವರೂಪವನ್ನ ಕಳೆದುಕೊಳ್ಳದೆ ಲಯ ಭಾವಗಳೊಂದಿಗೆ ಹೊಸತನವನ್ನು ಪಡೆದುಕೊಂಡು ಸಾಂದರ್ಭಿಕ ಸನ್ನಿವೇಶಗಳನ್ನು ನವನವೀನ ಸಂಶೋಧನೆಗಳೊಂದಿಗೆ ರೂಪಕ ಪ್ರತಿಮೆ ಹೋಲಿಕೆಗಳಿಂದ ಭಿತ್ತರಿಸಲ್ಪಡುವ ಗಜಲ್ ಗಳಿಗೆ ಜದೀದ್ ಗಜಲೆ ಗಳೆಂದು ಕರೆಯಲಾಗುತ್ತದೆ‌
ಇವಿಷ್ಟು ಗಜಲ್ ಪ್ರಕಾರಗಳು. ಇಲ್ಲಿ ವಿವರವಾಗಿ ಹೇಳಿಲ್ಲ ಬದಲಾಗಿ ನಮ್ಮ ತಿಳುವಳಿಕೆಗಾಗಿ ಕೇವಲ ಪ್ರಕಾರಗಳ ಬಗ್ಗೆ ಮಾಹಿತಿ ನೀಡಿದ್ದೆನೆ ಆಸಕ್ತಿ ಉಳ್ಳವರು ಈ ಎಲ್ಲಾ ಪ್ರಕಾರಗಳನ್ನ ವಿಸ್ತಾರವಾಗಿ ಅಭ್ಯಾಸ ಮಾಡಬಹುದು.

ಅನಿಲ್‌ ಕುಮಾರ್ ಹೆಚ್ ಜಿ.
ಕೃಪೆ:
“ನೂರ್ – ಏ – ತಬಸ್ಸುಮ್” ಪುಸ್ತಕದ ಮುನ್ನುಡಿಯಿಂದ
ಯು ಸಿರಾಜ್ ಅಹಮದ್ ಸೊರಬ.
ಸಾಹಿತಿ, ಗಜಲ್ ಕವಿ.

Wednesday, May 13, 2020

ಸ್ತಭ್ದವಾಗಲಿ ಜಗತ್ತು

ಸ್ತಭ್ದವಾಗಲಿ ಜಗತ್ತು
ನೀ ಎನ್ನ ಜೊತೆಗಿದ್ದಾಗ

ನಾಲ್ಕು ನಯನಗಳು ಸೇರಿದಾಗ
ಅಧರಗಳು ಕೂಡಿದಾಗ

ಉಕ್ಕಿ ಹರಿಯುವ ಆಸೆಗಳು
ಬೆತ್ತಲಾದಗ
ಮಿ೦ಚು ಹುಳು ಮಿನುಗಿ  ಮಿನುಗಿ,  ಮಾಯವಾದಾಗ

ಆ ಪ್ರಕಾಶತೆಯ ಮಬ್ಬಲ್ಲಿ  ಮಿ೦ದೇದ್ದು

ಆಸೆಗಳು ತುದಿ ಅ೦ಚಿನಲಿ ನಲುಗಾಡಿ

ನಗ್ನವಾದ ಮನಸ್ಸುಗಳ ಮಿಲನದಿ
ಪ್ರಣಯರಾಗದಿ ಹಾಡುತ್ತ

ಉಪಲಾಲನೆಯ ಸೋರಿಕೆಯನ್ನು ಅನುಭವಿಸುತ್ತ

ಬೆರೆಯುತ, ನಲಿಯುತ್ತಾ
ನಿನ್ನಲಿ ನಾನಾಗಿ
ಇಬ್ಬರು ಒ೦ದಾಗಿ
ಮರೆಯಾದ ಬೆಳಕಲಿ ಸೇರಿ
ಮರೆಯುವ ನಮ್ಮನೆ ನಾವು.

         
                     ಅನಿಲ್ ಕುಮಾರ್ ಹೆಚ್ ಜಿ

Thursday, May 7, 2020

ಗಾಂಧಿ ಇಂದು

ಗಾಂಧಿ ಇಂದು

ಬಿಕ್ಕಳಿಸಿ ಅಳುತ್ತ
ಬೀದಿಯಲ್ಲಿ
ನಿಂತೋಬ್ಬ 
ಅರೆಬೆತ್ತಲೆ ಫಕ್ಕಿರ 
ಕೂಗಿ ಕೂಗಿ.....
ಹೇಳಿದ
ಕನಸುಗಳು ಮಾರಟಕ್ಕಿವೆ
ನಾ ಕಂಡ ಕನಸುಗಳು,
ನಿಮಗಾಗಿ ಸುರಿಸಿದ 
ಬೆವರ ಹನಿಗಳು
ತಿಂದ ಪೆಟ್ಟುಗಳು
ಸೆರೆವಾಸದ ನೋವುಗಳು....

Sunday, May 3, 2020

ಅಕ್ಕನೇಂಬ ಮಹಾಸಾಧ್ವಿ

ಅಕ್ಕನೇಂಬ ಮಹಾಸಾಧ್ವಿ


ಮಹಾಸಾಧ್ವಿ
ಗಟ್ಟಿ ಮನಸ್ಸಿನ
ದೇವಿ, ತನ್ನ ಸಮುದಾಯದವರಿಂದಲೇ
ತೀರಸ್ಕರಗೊಂಡರು
ಶಿವನ ಮೆಚ್ಚಿನ ಸಾತ್ವಿಕ ಪತ್ನಿಯಾದಳು.


ರೋಮ,ರೋಮಗಳಲ್ಲಿ
ಶಿವಲಿಂಗನನೇ ತೋರಿಸಿದ
ಮಹಾಸಾಧ್ವಿಯ ಭಕ್ತಿ
ಅಖಂಡ ಲೋಕದ ಯಜಮಾನನಿಗೂ ತಿಳಿಯಲಿಲ್ಲ


ಚೆಂದವೋ ಚೆಂದ ನನ್ನ
ನಲ್ಲ ಚನ್ನಮಲ್ಲಿಕಾರ್ಜುನ
ಎಂದು ಭಕ್ತಿಯ ಒಲವಿನಾಳದಿ
ಕುಣಿದಾಡಿದ ದೇವಿಯ ಕಾಲುಗಳನ್ನೆ ಮುರಿದಿಟ್ಟರು.


ಉಡುತಡಿಯಿಂದ ಕಲ್ಯಾಣಕ್ಕೆ
ಬೆಳಕೇಂಬ ಬೆತ್ತಲೆಯ ಅಂಗಿಯ ತೊಟ್ಟು
ಕದಳಿಯ ಕರ್ಪೂರವಾಗಿ
ಪ್ರಜ್ವಾಲಿಸಿದಳು ದೇವಿ.


ಕಲ್ಯಾಣದಲ್ಲಿ ಕ್ರಾಂತಿಯ ಜ್ಯೋತಿ ಬೆಳಗಿಸಿದ
ಶಿವಶರಣೆ ದೇವಿ
ಹಿರಿಯ ಬಸವಣ್ಣನಿಗೂ
ಅಕ್ಕನೆಂಬ ಮಹಾದೇವಿಯೇ ಅಗಿಬಿಟ್ಟಳು.


ಚೆನ್ನ ಮಲ್ಲಿಕಾರ್ಜುನನ ಅಂತರಾಳದ
ಸಪ್ತಸ್ವರ ನುಡಿಸುವ ಶಾರದೆಯಾಗಿ
ತ್ರೀನೇತ್ರದಾರಿಯ ಶಿರದ ಮೇಲೆ ಪವಿತ್ರ ಗಂಗೆಯಾಗಿ
ತೊಳೆದಳು ಲೋಕದ ಡೊಂಕನ್ನ.


ಸ್ಫಟಿಕದಂತೆ ಸತ್ಯವಂತೆ
ಶ್ವೇತವರ್ಣದಂತೆ ಪವಿತ್ರಳು
ಚೆನ್ನನ ಚಿನ್ನದಂತ ಪತ್ನಿಯಾಗಿ
ಕದಳಿಯಲ್ಲಿ ಕರ್ಪೂರದಂತೆ ಕರಗಿಹೋದಳು.


                                         ಅನಿಲ್ ಕುಮಾರ್ ಹೆಚ್ ಜಿ.