Sunday, June 7, 2020

ಕೂಲಿ ಕಾರ್ಮಿಕನ ಸಾತ್ವಿಕ ಕ್ರಾಂತಿಗೀತೆ

ಕೂಲಿ ಕಾರ್ಮಿಕನ ಸಾತ್ವಿಕ ಕ್ರಾಂತಿಗೀತೆ


ಹಸಿದ ಹೊಟ್ಟೆಯನ್ನ ಅಣಕಿಸುವಿರೇನೂ
ಬತ್ತದ ಜೀವರಕ್ತ ಇನ್ನೂ ಗಟ್ಟಿಯಾಗಿದೆ
ಬೆಳಕಿದೆ, ಬರವಸೆಯಿದೆ
ದಾರಿ ದೂರವಿರಬಹುದು ಆದರೇನೂ
ಗುರಿಮುಟ್ಟುವ ಚಲವಿದೆ, ದೇಹದಲ್ಲಿ ಬಲವಿದೆ.

ಊರು ಬಿಟ್ಟು ಸುಡು ಬಿಸಿಲ ಲೆಕ್ಕಿಸದೆ
ಹನಿ ಹನಿ ಬೆವರಿನಲ್ಲಿ ರಕ್ತ ಸುರಿಸಿ ದೇಶ ಕಟ್ಟಿದ ನಮಗೆ 
ಒಂದು ಚೂರು ರೊಟ್ಟಿ ನೀಡಲು 
ನಿಯಮವಳಿಗಳು ಬೇಕೆ ಅಥವಾ
ಆಧಾರ್ ಕಾರ್ಡ್ ನ ಕೊನೆಯ ನಾಲ್ಕು ಸಂಖ್ಯೆಗಳು ಸಾಕೇ.

ಬಸವಳಿದ ಈ ದೇಹಕ್ಕೆ
ಬಂದೂಕಿನ ಗುಂಡಿಗೆ
ಭೂಟಿನ ಏಟಿನ ಹೇದರಿಕೆಯೇನೂ
ಶತಮಾನಗಳ ಇತಿಹಾಸವಿದೆ ನಮ್ಮ ದೇಹದ 
ಮೇಲಿನ ಗುರುತುಗಳಿಗೆ ಹೆಪ್ಪು ಗಟ್ಟಿದ ಮಾಸದ ಗಾಯಗಳಿಗೆ. 

ಕೂಳಿಗಾಗಿ ಕೂಲಿಗಾಗಿ ಜೋಳಿಗೆ ಹಿಡಿದು 
ಹುಟ್ಟಿದ ನೆಲ ಬದುಕ್ಕಿದ್ದ ಮನೆ ಬಿಟ್ಟು ಬಂದ ನಾವು
ನಿಮ್ಮ ಸಾಮ್ರಾಜ್ಯಶಾಹಿತ್ವದ ದಂಡಯಾತ್ರೆಯಲ್ಲಿ ಸಿಲುಕಿ ನಲುಗಿದೆವು
ಇಗೋ ಇಂದು ತುಂಬಿದೆ ಆ ಜೋಳಿಗೆ
ಅಕ್ಕಿಯ ಕಾಳಿನಿಂದಲ್ಲ ನೋವಿನ‌ ಕಥೆಗಳಿಂದ.

ದಿಕ್ಕಾರವಿದೆ ಮನಸ್ಸಿನಲ್ಲಿ
ರಕ್ತಹೀರುವ ಯಜಮಾನಿಕೆಗೆ
ಆಶ್ವಾಸನೆ ನೀಡುವ ರಾಜಕಾರಣಿಗಳಿಗೆ
ಆದರೆ ನಿಮಗಿದೋ ನಾ‌ ಕೃತಜ್ಞ  ಯಾಕೆಗೊತ್ತೆನು
ದೇಹದಣಿದಿರ ಬಹುದು ಆದರೆ 
ಬದುಕವ , ಜೀವಿಸುವ ಆತ್ಮವಿಶ್ವಾಸಕ್ಕೆ ನೀವು ಕೊಟ್ಟ ಚಡಿಏಟುಗಳೆ ಮೆಟ್ಟಿಲಾಗಿವೆ.

ಅನಿಲ್ ಕುಮಾರ್